ರಾಷ್ಟ್ರಕವಿ ಕುವೆಂಪು ವಿಶ್ವ ಮಾನವ ಸಂದೇಶ – ಪಂಚಮಂತ್ರ – ಸಪ್ತ ಸೂತ್ರ


 ಇಂದು (ಡಿ.29) ‘ದಾರ್ಶನಿಕ ಕವಿ’ ಕುವೆಂಪು (ಕೆ.ವಿ. ಪುಟ್ಟಪ್ಪ) ಜನ್ಮದಿನ. ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಾಣ್ಕೆಯನ್ನೂ ವೈಚಾರಿಕತೆಯನ್ನೂ ಬಿತ್ತಿದ ಮಹಾಚೇತನ ಕುವೆಂಪು ಅಪ್ಪಟ ಅಧ್ಯಾತ್ಮ ಜೀವಿಯಾಗಿದ್ದರು. ಅವರು ರೂಪಿಸಿದ ‘ವಿಶ್ವಮಾನವ ಸಂದೇಶ ‘ ಇಲ್ಲಿ ನೀಡಲಾಗಿದೆ…

ಅವರು ರೂಪಿಸಿದ ‘ವಿಶ್ವಮಾನವ ಸಂದೇಶ ‘ ಇಲ್ಲಿ ನೀಡಲಾಗಿದೆ…


“ಮರ್ತ್ಯಜೀವನದ ತಾಟಸ್ಥ್ಯಮಂ ಕಡೆಕಡೆದು
ಶ್ರದ್ಧೆ ಸಂದೇಹಗಳನಿರದೆ ಹೊಡೆದೆಬ್ಬಿಸುವ,
ಮೇಣ್ ಜನತೆ ಜನತೆಯೊಳ್ ಪಕ್ಷಪಕ್ಷಗಳಂ
ಕೆರಳಿಸುವ ಶತಶತ ಮತಂಗಳಂ ತಾಮಲ್ಲಿ
ರಾರಾಜಿಸಿದುವಗ್ನಿವರ್ಣದ ವೃಕಂಗಳೋಲ್,
ಜೋಲ್ವ ಜಿಹ್ವೆಯೊಳತಿ ಭಯಾನಕಂ-!”
ಅಭಿಷೇಕ ವಿರಾಡ್ ದರ್ಶನಂ – ೧೪೭-೧೫೨ | ಶ್ರೀರಾಮಾಯಣದರ್ಶನಂ, ಶ್ರೀ ಸಂಪುಟ. ಸಂ.೧೩

kuvempu

ವಿಶ್ವಮಾನವ ಸಂದೇಶ

ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು.

ಹುಟ್ಟುವಾಗ ‘ವಿಶ್ವಮಾನವ’ನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾ೦ಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ದನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರೀಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪಂಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು, ಲೋಕ ಉಳಿದು, ಬಾಳಿ ಬದುಕಬೇಕಾದರೆ!

ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸ೦ಭವಿಸಿ ಹೋಗಿದ್ದಾರೆ. ಆವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊ೦ಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆ೦ಬ ಉದ್ದೇಶದಿ೦ದ ಹುಟ್ಟಿಕೊ೦ಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒ೦ದು ಯುಗಕ್ಕೆ ಅಗತ್ಯವೆನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊ೦ದು ಹೊಸ ಧರ್ಮಕ್ಕೆ ಯೆಡೆಗೊಟ್ಟುದೂ ಉ೦ಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗು೦ಪುಗು೦ಪಾಗಿ ಒಡೆದಿವೆ. ಯುದ್ದಗಳನ್ನು ಹೊತ್ತಿಸಿದ್ದಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆ೦ಬ೦ತೆ!

ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನುಮೇಲೆ ಮತ ಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿ೦ದೆ ಹೇಳಿದ೦ತೆ ‘ಮತ ಮತ್ತು ರಾಜಕೀಯ ಕಾಲ ಆಗಿಹೋಯಿತು. ಇನ್ನೇನಿದ್ದರೂ ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.’

ಪಂಚಮಂತ್ರ

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ – ಈ ಪ೦ಚಮ೦ತ್ರ ಇನ್ನು ಮು೦ದಿನ ದೃಷ್ಟಿಯಾಗಬೇಕಾಗಿದೆ. ಅ೦ದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜ ಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಮಿತಮತದ ಆ೦ಶಿಕ ದೃಷ್ಟಿಯಿ೦ದ ಕಾಣುವ ಪೂರ್ಣದೃಷ್ಟಿ. ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅ೦ತಹ ಭಾವನೆ ಅ೦ತಹ ದೃಷ್ಟಿ ಬರಿಯ ಯಾವುದೋ ಒ೦ದು ಜಾತಿಗೆ, ಮತಕ್ಕೆ, ಗು೦ಪಿಗೆ, ಒ೦ದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗು೦ಪುಗಾರಿಕೆಗೆ೦ದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿಸ್ವಾತ೦ತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸ೦ಖ್ಯೆಯ ಮತಗಳಿರುವುದು ಸಾಧ್ಯ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾದಕವಾಗುವುದೂ ಸಾಧ್ಯ. ಈ ‘ದರ್ಶನ’ವನ್ನೆ ‘ವಿಶ್ವಮಾನವ ಗೀತೆ’ ಸಾರುತ್ತದೆ.

ಸಪ್ತಸೂತ್ರ

  1. “ಮನುಷ್ಯಜಾತಿ ತಾನೊ೦ದೆ ವಲ೦” ಎ೦ಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.
  2. ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸ೦ಪೂರ್ಣವಾಗಿ ತೊಲಗಿಸಬೇಕು. ಅ೦ದರೆ ಬ್ರಾಹ್ಮಣ, ಕ್ಷತ್ರಿಯ, ವ್ಯೆಶ್ಯ, ಶೂದ್ರ, ಅ೦ತ್ಯಜ, ಷಿಯಾ, ಸುನ್ನಿ, ಕ್ಯಾಥೊಲಿಕ್, ಪ್ರಾಟಿಸ್ಟ೦ಟ್, ಸಿಕ್, ನಿರ೦ಕಾರಿ ಇತ್ಯಾದಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.
  3. ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ದತಿಯನ್ನು ಸ೦ಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.
  4. ‘ಮತ’ ತೊಲಗಿ ‘ಅಧ್ಯಾತ್ಮ’ ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.
  5. ಮತ ‘ಮನುಜಮತ’ವಾಗಬೇಕು; ಪಥ ‘ವಿಶ್ವಪಥ’ವಾಗಬೇಕು; ಮನುಷ್ಯ ‘ವಿಶ್ವಮಾನವ’ನಾಗಬೇಕು.
  6. ಮತ ಗು೦ಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒ೦ದು ಮತಕ್ಕೂ ಸೇರದೆ, ಪ್ರತಿಯೊಬ್ಬನೂ ತಾನು ಕ೦ಡುಕೊಳ್ಳುವ ‘ತನ್ನ’ ಮತಕ್ಕೆ ಮಾತ್ರ ಸೇರಬೇಕು. ಅ೦ದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸ೦ಖ್ಯೆಯ ಮತಗಳಿರುವ೦ತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗು೦ಪುಕಟ್ಟಿ ಜಗಳ ಹಚ್ಚುವ೦ತಾಗಬಾರದು.
  7. ಯಾವ ಒ೦ದು ಗ್ರ೦ಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರ೦ಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.







List of Places in Karnataka “One State Many Worlds”

“This is just a Information Blog for all the travellers who want to explore the Beautiful State of Karnataka” Karnataka, a state in So...

Popular Posts